ಆಸ್ತಿಕ ಪರ್ವ / Astika Parva
VidwanN.RanganathaSharma
あらすじ
ಶ್ರೀ ಭಗವದ್ಗೀತಾ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ 'ಆಸ್ತಿಕಪರ್ವ' ಎಂಬ ಗ್ರಂಥವು ಬಿಡುಗಡೆಯಾಗುತ್ತಿರುವುದು ಸಂತೋಷದ ಸಂಗತಿ. ಮಹಾಮಹೋಪಾಧ್ಯಾಯ ವಿದ್ವಾನ್ ರಂಗನಾಥ ಶರ್ಮಾರವರು ಆಧುನಿಕ ಜಗತ್ತಿನಲ್ಲಿ ಆಸ್ತಿಕರ ಮನೋಬಲವನ್ನು ಹೆಚ್ಚಿಸುವಂತಹ ದೊಡ್ಡ ಪ್ರಯತ್ನವನ್ನು ಈ ಗ್ರಂಥದ ಮೂಲಕ ಮಾಡುತ್ತಿದ್ದಾರೆ. ಈ ಹೊತ್ತು ಸಮಾಜದಲ್ಲಿ ನೈತಿಕತೆಯ ಪತನವನ್ನು ನಾವು ವಿಪುಲವಾಗಿ ಕಾಣುತ್ತಿದ್ದೇವೆ. ಮೋಸ ಮಾಡುವುದು, ಸುಳ್ಳು ಹೇಳುವುದು ಸರ್ವೇ ಸಾಮಾನ್ಯ ಎಂಬಂತೆ ಆಗಿಬಿಟ್ಟಿವೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುವದು ಹಾಗಿರಲಿ, ನಡೆದುಕೊಳ್ಳುವ ಪ್ರಯತ್ನವನ್ನು ಕೂಡ ಮಾಡುವಂತಹ ಪರಿಸ್ಥಿತಿಯಲ್ಲಿ ಇವತ್ತು ಸಮಾಜದ ಅನೇಕರು ಇಲ್ಲ. ಈ ರೀತಿಯಲ್ಲಿ ಮೋಸ ಮಾಡಿದ್ದರಿಂದ, ಸುಳ್ಳು ಹೇಳಿದ್ದರಿಂದ, ತನಗೆ ಯಾವುದೋ ನಷ್ಟವಾಗುತ್ತದೆಂಬ ಭಾವನೆ, ಕಲ್ಪನೆಯೂ ಇಲ್ಲ. ತಪ್ಪು ಮಾಡಿದ್ದೇನೆ; ಈ ತಪ್ಪು ಮಾಡಿದ್ದು ಸರಿಯಲ್ಲ ಎಂಬ ಒಂದು ಸಂಕೋಚದ ಭಾವನೆಯೂ ಕೂಡ ಇಲ್ಲ. ಈ ಪರಿಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಾ ಇದೆ. ಪರಿಣಾಮವಾಗಿ ಸಮಾಜದಲ್ಲಿ ಅನೇಕ ಸಮಸ್ಯೆಗಳು - ಅಶಾಂತಿ, ಅಸುಖಗಳು ಬೆಳೆಯುತ್ತಾ ಇವೆ. ಇದಕ್ಕೆ ಕಾರಣಗಳೇನು? ನೈತಿಕತೆಯ ಪತನಕ್ಕೆ ಕಾರಣ ಏನು? ಧರ್ಮದಲ್ಲಿ ನಂಬಿಕೆಯಿರದಿರುವಿಕೆಯೇ ಕಾರಣ. ಧರ್ಮ ಎಂದರೆ ಈ ಪ್ರಪಂಚವನ್ನೆಲ್ಲ ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗುವಂತಹ ನಿಯಮಗಳ ಒಂದು ಸಮೂಹ. ನಾವು ಇಲ್ಲಿ ಮಾಡಿದಂತಹ ಒಳ್ಳೆಯ - ಕೆಟ್ಟ ಕೆಲಸಗಳಿಗೆ ಮುಂದೆ ಸುಖದುಃಖಗಳ ಫಲವನ್ನು ಅನುಭವಿಸಲಿಕ್ಕಿದ್ದೇವೆ ಎಂಬ ಕರ್ಮಸಿದ್ಧಾಂತ ಧರ್ಮದ ನಂಬಿಕೆಯಲ್ಲಿ ಬಹಳ ಮುಖ್ಯವಾದದ್ದು. ಶರೀರಕ್ಕಿಂತ ಬೇರೆಯಾಗಿ 'ನಾನು' ಇದ್ದೇನೆ. ಈ ಶರೀರ ಬಿದ್ದು ಹೋದ ನಂತರವೂ ಮತ್ತೆ ಬೇರೆ ಶರೀರವನ್ನು ಸ್ವೀಕರಿಸಿಕೊಂಡು ಬಂದು ಸುಖದುಃಖಗಳನ್ನು ಅನುಭವಿಸಲಿಕ್ಕಿದ್ದೇನೆ ಎಂಬ ಪುನರ್ಜನ್ಮ ಸಿದ್ಧಾಂತ ಕರ್ಮಸಿದ್ಧಾಂತಕ್ಕೆ ಬಲವಾಗಿ ನಿಲ್ಲುತ್ತದೆ. ಅಲ್ಲದೇ ಈ ಆಸ್ತಿಕ್ಯಕ್ಕೆ, ಧರ್ಮದಲ್ಲಿ ನಂಬಿಕೆಗೆ, ದೇವರಲ್ಲಿ ಆಸ್ತಿಕ್ಯ, ದೇವರಲ್ಲಿ ನಂಬಿಕೆ ಹಿಂಬಲವಾಗಿ ನಿಲ್ಲುತ್ತದೆ. ತಾನು ಮಾಡಿದ ಕೆಲಸಗಳಿಗೆ - ಕರ್ಮಗಳಿಗೆ ದೇವರು ಫಲವನ್ನು ಕೊಡುತ್ತಾನೆ. ಈಶ್ವರ ಫಲವನ್ನು ಕೊಡುತ್ತಾನೆ. ಆದ್ದರಿಂದ ಆ ಒಡೆಯನಾದ ದೇವರು ಇದ್ದಾನೆ ಎಂಬ ಒಂದು ನಿಷ್ಠೆಯ ಭಾವನೆ ಇರಬೇಕು. ಹೀಗೆ ನೈತಿಕತೆಯ ಪತನಕ್ಕೆ ಧರ್ಮದಲ್ಲಿ ನಂಬಿಕೆ ಹೋಗಿರುವುದು ಕಾರಣ. ಆ ನಂಬಿಕೆ ಹೋಗಲು ಕಾರಣ, ದೇವರ ಅಸ್ತಿತ್ವದಲ್ಲಿ ನಂಬಿಕೆ ಇಲ್ಲದಿರುವುದೇ ಆಗಿದೆ.#NRanganathasharma



