あらすじ
ಹಬ್ಬ-ಹರಿದಿನಗಳು ನಮ್ಮ ಧಾರ್ಮಿಕ ಮತ್ತು ಸಾಮಾಜಿಕ ಜೀವನದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿರುವ ಒಂದು ಅತಿಮುಖ್ಯವಾದ ಮತ್ತು ಅತ್ಯಂತ ಪರಿಚಿತವಾದ ವಿಷಯ. ಹರಿದಿನಗಳ ವಿಷಯ ಹೇಗಾದರೂ ಇರಲಿ, ಹಬ್ಬಗಳಂತೂ ಸಾಮಾನ್ಯವಾಗಿ ಇಡೀ ಮನುಷ್ಯವರ್ಗಕ್ಕೇ ಸಹಜಪ್ರೀತಿಯ ವಿಷಯವಾಗಿವೆಯೆಂಬುದರಲ್ಲಿ ಯಾವ ಸಂಶಯವೂ ಇಲ್ಲ. ಉತ್ಸವಪ್ರಿಯಾಃ ಖಲು ಮನುಷ್ಯಾಃ (ಶಾಕುನ್ತಲ ಅಂಕ 6) -ಎಂದು ಮಹಾಕವಿ ಕಾಳಿದಾಸನೂ ಈ ಸತ್ಯವನ್ನು ಗಮನಿಸಿದ್ದಾನೆ. ಅವು ಜೀವನದಲ್ಲಿನ ವಿಶೇಷವಾದ ಸಂತೋಷದ ಸಂದರ್ಭಗಳು. ಬಂಧುಬಳಗ, ಇಷ್ಟಮಿತ್ರರು ಮುಂತಾದವರು ಒಂದೆಡೆಯಲ್ಲಿ ಒಟ್ಟಾಗಿ ಸೇರುವುದು, ಯಥಾಶಕ್ತಿಯಾಗಿ (ಕೆಲವೊಮ್ಮೆ ಶಕ್ತಿಯನ್ನೂ ಮೀರಿ!) ರುಚಿರುಚಿಯಾದ ತಿಂಡಿತಿನಿಸುಗಳನ್ನೂ ಪಾನೀಯಗಳನ್ನೂ ಸೇವಿಸುವುದು, ಆಡುವುದು, ಪಾಡುವುದು, ಮನಸೋ ಇಚ್ಛೆ ಮಾತನಾಡುವುದು, ಇತ್ಯಾದಿ ರೂಪಗಳಲ್ಲಿ ಇಂದ್ರಿಯಗಳ ಆನಂದವನ್ನನುಭವಿಸುತ್ತಾ, ಜೀವನದಲ್ಲಿ ಕಷ್ಟಕಾರ್ಪಣ್ಯಗಳಿದ್ದರೆ ಅವುಗಳನ್ನು ಮರೆಯುವುದು, ಇದು ಸಾಮಾನ್ಯವಾಗಿ ಎಲ್ಲ ದೇಶ, ಜನಾಂಗ, ಸಂಸ್ಕೃತಿಗಳಿಗೆ ಸೇರಿದ ಜನರೂ ಹಬ್ಬಗಳನ್ನು ಆಚರಿಸುವ ವಿಧಾನವಾಗಿದೆ. ತಿಂಗಳುಗಳ ಕ್ರಮದಲ್ಲಿ ಹಬ್ಬಗಳನ್ನು ನಿರೂಪಿಸುತ್ತಾ ಅವುಗಳ ಇತರ ವಿಶೇಷಗಳನ್ನು ಆಯಾ ಪರ್ವಗಳ ವಿವರಣೆಯಲ್ಲಿಯೇ ಅಡಕಮಾಡುತ್ತೇವೆ. (ವ್ರತಗಳನ್ನು ಮಾನಸಿಕ, ವಾಚಿಕ, ಕಾಯಿಕ ಎಂದು ವಿಭಾಗ ಮಾಡುವುದುಂಟು.) Our other books here can be searched using #BharathaSamskruthiPrakashana