あらすじ
ದಾಸ ಸಾಹಿತ್ಯವು ಭಕ್ತಿ, ನೀತಿ ಮತ್ತು ಜೀವನ ಮೌಲ್ಯಗಳ ಸಾಗರ. ಆದರೆ ಈ ಭಾವಗಾನಗಳ ಮದ್ಯೆ ಅಡಗಿರುವ ಗಣಿತದ ಮುತ್ತುಗಳನ್ನು ಅನೇಕರು ಗಮನಿಸಿಲ್ಲ. ಪುರಂದರದಾಸರು, ಕನಕದಾಸರು ಹಾಗೂ ಇತರ ದಾಸರು ತಮ್ಮ ಕೀರ್ತನೆಗಳಲ್ಲಿ ಭಕ್ತಿಭಾವದ ಜೊತೆಗೆ ತರ್ಕ, ಅಳತೆ, ಅನುಪಾತ, ಕ್ರಮ, ಸಂಖ್ಯೆ ಮುಂತಾದ ಗಣಿತದ ಅಂಶಗಳನ್ನು ಅದ್ಭುತವಾಗಿ ಜೋಡಿಸಿದ್ದಾರೆ. ಭಕ್ತಿ ಪಥದಲ್ಲಿ ಸಾಗುತ್ತಿದ್ದರೂ, ಅವರ ಸಾಹಿತ್ಯದಲ್ಲಿ ಕಾಲಮಾನದ ಲೆಕ್ಕ, ಜೀವನದ ಹಂತಗಳ ಅಳತೆ, ನಿತ್ಯ ಜೀವನದ ಪರಿಮಾಣ- ಪ್ರಮಾಣಗಳು ಮತ್ತು ಅನಂತ-ಶೂನ್ಯಗಳ ತತ್ವಗಳನ್ನು ಸುಂದರವಾಗಿ ನಿರೂಪಿಸಿದ್ದಾರೆ. ಈ ಗಣಿತೀಯ ಅಂಶಗಳು ಕೇವಲ ಲೆಕ್ಕಾಚಾರದ ವಿಷಯವಲ್ಲ, ಅವು ಜೀವನದ ತತ್ವವನ್ನು ತಲುಪಿಸಲು ಸಾಧನಗಳೂ ಆಗಿವೆ. ಈ ಕೃತಿಯಲ್ಲಿ, ದಾಸ ಸಾಹಿತ್ಯದ ಆಯ್ದ ಕೀರ್ತನೆಗಳ ಮೂಲಕ ಗಣಿತದ ವಿವಿಧ ತತ್ವಗಳನ್ನು ಹಂತಹಂತವಾಗಿ ಪರಿಚಯಿಸಲಾಗಿದೆ. ಓದುಗರು ಕೇವಲ ಸಾಹಿತ್ಯದ ಸೊಗಸನ್ನು ಅನುಭವಿಸುವುದಲ್ಲ, ಗಣಿತವು ಹೇಗೆ ಭಕ್ತಿಯೊಂದಿಗೆ ಬೆಸೆದುಕೊಂಡಿದೆ ಎಂಬುದನ್ನು ಅರಿತುಕೊಳ್ಳುವರು. ಭಕ್ತಿ ಮತ್ತು ವಿಜ್ಞಾನ ಒಂದರನ್ನೊಂದು ಪೂರೈಸುತ್ತವೆ ಎಂಬ ಸತ್ಯವನ್ನು ಈ ಪುಸ್ತಕದಿಂದ ಓದುಗರಿಗೆ ತಿಳಿಸುವುದು ನನ್ನ ಆಶಯ. ಈ ಪ್ರಯತ್ನವು ಓದುಗರಲ್ಲಿ ಸಾಹಿತ್ಯಾಸಕ್ತಿಯ ಜೊತೆಗೆ ಗಣಿತಾಸಕ್ತಿಯನ್ನು ಹೆಚ್ಚಿಸಲಿ ಎಂಬುದು ನನ್ನ ಹಾರೈಕೆ.